Articles
“ಅಪ್ಪಾ… ಯಾರೀ ಶಿಕ್ಷಕ?”
0
36157
Pavan Kumara M R
file_000000006fd0823098be0e1f437876a2

ಆ ದಿವಸ ಗುರುವಾರ. ಸಂಜೆಯ ಸೂರ್ಯ ಪಶ್ಚಿಮದ ಬಾನಂಚಿನಲ್ಲಿ ತನ್ನ ಕೊನೆಯ ಬಣ್ಣಗಳನ್ನು ಚೆಲ್ಲುತ್ತಿದ್ದ. ಕಾಲೇಜು ಮುಗಿಸಿ ಮನೆಗೆ ಹೊರಟಿದ್ದೆ. ಕಾವೇರಿ ಭವನದ ಬಳಿ ರಸ್ತೆ ದಾಟುತ್ತಿದ್ದಾಗ ಒಂದು ಪುಟ್ಟ ಧ್ವನಿ ಕಿವಿಗೆ ಬಿತ್ತು—

“ಅಪ್ಪಾ… ಯಾರೀ ಶಿಕ್ಷಕ?”

ಪುಟ್ಟ ಪ್ರಶ್ನೆ. ಆದರೆ ಅದು ನನ್ನೊಳಗೆ ದೊಡ್ಡ ಅಲೆ ಎಬ್ಬಿಸಿತು. ಬಸ್ಸು ಹತ್ತಿ ಕಿಟಕಿಯ ಪಕ್ಕ ಕುಳಿತು ಕಣ್ಣು ಮುಚ್ಚಿದೆ. ಕಣ್ಣು ಮುಚ್ಚಿದರೂ… ಮನಸ್ಸಿನಲ್ಲಿ ಒಂದೇ ಪ್ರಶ್ನೆ—

“ಯಾರೀ ಶಿಕ್ಷಕ?”

ಶಿಕ್ಷಕ ಎಂದರೆ ಪುಟ್ಟ ಮಕ್ಕಳಿಗೆ ಅಕ್ಷರದ ಮೊದಲ ಹೆಜ್ಜೆ ಕಲಿಸುವಾಗ, ತಾನೂ ಅವರಷ್ಟೇ ಪುಟ್ಟವನಾಗಿ, ಅವರ ನಗುವಿನಲ್ಲಿ ತನ್ನ ನಗುವನ್ನು ಬೆರೆಸಿಕೊಂಡು, ಅವರ ಪುಟ್ಟ ಲೋಕದಲ್ಲಿ ಮಗುವಾಗುವವನೇ?

ಶಿಕ್ಷಕ ಎಂದರೆ ಪೊಲೀಸಿನಂತೆಯೇ? ಮಕ್ಕಳು ಪೆನ್ಸಿಲ್, ರಬ್ಬರ್, ಮೆಂಡರ್ ಕದ್ದಾಗ ಅವರನ್ನು ಪ್ರಶ್ನಿಸಿ, ಸತ್ಯವನ್ನು ಹುಡುಕಿ, ತಪ್ಪಿನ ಮುಖವಾಡ ಕಳಚಿ, ಶಿಸ್ತಿನ ದಾರಿಯನ್ನು ತೋರಿಸುವವನೇ?

ಶಿಕ್ಷಕ ಎಂದರೆ ಶಿಲ್ಪಿಯೇ? ಆಕಾರವಿಲ್ಲದ ಕಲ್ಲಿನಂತಿರುವ ಮಗುವನ್ನು ತಿದ್ದಿ, ತೀಡಿ, ತಾಳ್ಮೆಯಿಂದ ಕೆತ್ತಿ, ಅದರೊಳಗೆ ಅಡಗಿರುವ ಪ್ರತಿಭೆಯನ್ನು ಹೊರತೆಗೆದು, ಸಮಾಜ ಗೌರವಿಸುವ ಸುಂದರ ಶಿಲ್ಪವನ್ನಾಗಿ ರೂಪಿಸುವವನೇ?

ಶಿಕ್ಷಕ ಎಂದರೆ ವ್ಯಾಪಾರಿಯೇ? ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಪರೀಕ್ಷೆಗಳೆಂಬ ತಕ್ಕಡಿಯಲ್ಲಿ ತೂಗಿ, ಅಂಕಗಳೆಂಬ ಬೆಲೆ ಕಟ್ಟಿ, “ಇವನ ಬೆಲೆ ಇಷ್ಟು… ಅವನ ಬೆಲೆ ಅಷ್ಟು…” ಎಂದು ಅವರ ಸಾಮರ್ಥ್ಯಕ್ಕೆ ಬೆಲೆ ನಿಗದಿಪಡಿಸುವವನೇ?

ಶಿಕ್ಷಕ ಎಂದರೆ ಲೇವಾದೇವಿಯ ಸೇಠನಂತೆಯೇ? ಯಾರು ಬಂದರು? ಯಾರು ಬರಲಿಲ್ಲ? ಯಾರು ಕಲಿತರು? ಯಾರು ಕಲಿಯಲಿಲ್ಲ? ಯಾರು ಮುಂದೆ? ಯಾರು ಹಿಂದೆ? ಎಂದು ಪ್ರತಿಯೊಬ್ಬ ವಿದ್ಯಾರ್ಥಿಯ ಲೆಕ್ಕವನ್ನೂ, ಬೆಳವಣಿಗೆಯನ್ನೂ ತನ್ನ ಮನಸ್ಸಿನ ಪುಸ್ತಕದಲ್ಲಿ ದಾಖಲಿಸಿಕೊಳ್ಳುವವನೇ?

ಶಿಕ್ಷಕ ಎಂದರೆ ಪತ್ತೆದಾರನೇ? ವಿದ್ಯಾರ್ಥಿಗಳ ನಡುವೆ ಜಗಳವಾದಾಗ ಜಗಳವನ್ನಷ್ಟೇ ನೋಡದೆ, ಅದರ ಹಿಂದಿರುವ ಕಾರಣವನ್ನು ಹುಡುಕಿ, ಮಾತಿನ ಹಿಂದೆ ಅಡಗಿರುವ ಮಾತನ್ನು ಕೇಳಿ, ತಪ್ಪಿನ ಹಿಂದೆ ಅಡಗಿರುವ ಮನಸ್ಸನ್ನು ಅರಿಯುವವನೇ?

ಶಿಕ್ಷಕ ಎಂದರೆ ಮೋಜಣಿದಾರನೇ? ಮೋಜಣಿದಾರನು ಭೂಮಿಯನ್ನು ಅಳೆದು ನಕ್ಷೆ ಬಿಡಿಸುವಂತೆ, ವಿದ್ಯಾರ್ಥಿಯ ಜ್ಞಾನವನ್ನು ಅಳೆದು, ಅವನ ಪ್ರಗತಿಯ ನಕ್ಷೆ ಬಿಡಿಸಿ, ಅವನು ಎಲ್ಲಿ ನಿಂತಿದ್ದಾನೆ, ಎಲ್ಲಿಗೆ ಸಾಗಬೇಕು ಎಂಬುದನ್ನು ತೋರಿಸುವವನೇ?

ಶಿಕ್ಷಕ ಎಂದರೆ ಚೆಕಿಂಗ್ ಇನ್ಸ್‌ಪೆಕ್ಟರೇ? ತಾನು ಬೋಧಿಸಿದ ಪಾಠ ವಿದ್ಯಾರ್ಥಿಯ ಮನಸ್ಸಿಗೆ ಎಷ್ಟು ತಲುಪಿದೆ? ಎಷ್ಟು ಅರ್ಥವಾಗಿದೆ? ಎಷ್ಟು ಉಳಿದಿದೆ? ಎಂದು ಮತ್ತೆ ಮತ್ತೆ ಪ್ರಶ್ನಿಸಿ, ಪರೀಕ್ಷಿಸಿ, ತಿಳಿದುಕೊಳ್ಳಲು ಪ್ರಯತ್ನಿಸುವವನೇ?

ಶಿಕ್ಷಕ ಎಂದರೆ ತೇಪೆ ಹಾಕುವವನೂ ಹೌದೇ? ತನ್ನ ಜ್ಞಾನಕ್ಕೆ ಮೀರಿದ ಪ್ರಶ್ನೆಯೊಂದು ವಿದ್ಯಾರ್ಥಿಯಿಂದ ಬಂದಾಗ, ಉತ್ತರ ತಿಳಿಯದೆ ತಡಕಾಡಿ, ತನ್ನ ಅಜ್ಞಾನವನ್ನು ಮುಚ್ಚಿಕೊಳ್ಳಲು ತೇಪೆ ಹಾಕಿದ ಉತ್ತರ ನೀಡುವವನೇ?

ಆದರೆ… ತಿಳಿಯದಿದ್ದನ್ನು ತಿಳಿದಂತೆ ನಟಿಸುವುದಕ್ಕಿಂತ, “ನನಗೆ ತಿಳಿದಿಲ್ಲ” ಎಂದು ಒಪ್ಪಿಕೊಂಡು, ಉತ್ತರ ಹುಡುಕಲು ಮುಂದಾಗುವುದೇ ಶಿಕ್ಷಕನ ಸತ್ಯಸಂಧತೆ ಅಲ್ಲವೇ?

ಹಾಗಾದರೆ ಶಿಕ್ಷಕ ಗ್ರಾಹಕನೂ ಹೌದೇ? ತನ್ನ ಅಂಗಿ ಹರಿದಾಗ ಹೊಸ ಅಂಗಿಯನ್ನು ಕೊಳ್ಳುವಂತೆ, ತನ್ನ ಜ್ಞಾನದಲ್ಲಿ ಕೊರತೆ ಕಂಡಾಗ ಹೊಸ ವಿಚಾರಗಳನ್ನು ಹುಡುಕುವವನು. ಪುಸ್ತಕಗಳಿಂದ… ಅನುಭವಗಳಿಂದ… ವಿದ್ಯಾರ್ಥಿಗಳಿಂದ ಸಮಾಜದಿಂದ…

ಹಾಗಾದರೆ—

ಇವೆಲ್ಲವೂ ಸೇರಿದರೆ ಪರಿಪೂರ್ಣ ಶಿಕ್ಷಕನೇ? ಅಥವಾ ಇವೆಲ್ಲವೂ ಶಿಕ್ಷಕನ ಒಂದೊಂದು ಮುಖವೇ?

ಆಲೋಚನೆಯ ಆಳಕ್ಕೆ ಇಳಿಯುತ್ತಿದ್ದಷ್ಟರಲ್ಲಿ ಬಸ್ಸು ಹಠಾತ್ತನೆ ಬ್ರೇಕ್ ಹಾಕಿತು. ತಲೆ ಮುಂದಿನ ಸೀಟಿಗೆ ಬಡಿದು, ಕಲ್ಪನೆಯ ಲೋಕ ಕಣ್ಮರೆಯಾಯಿತು. ಬಸ್ಸಿನಿಂದ ಇಳಿದು ಮನೆ ಕಡೆ ಹೆಜ್ಜೆ ಹಾಕಿದೆ.

ಆದರೆ ಒಂದು ಪ್ರಶ್ನೆ ಮಾತ್ರ ನನ್ನ ಜೊತೆಗೇ ಇತ್ತು.

“ಅಪ್ಪಾ… ಯಾರೀ ಶಿಕ್ಷಕ?”

ಬಹುಶಃ… ಆ ಪ್ರಶ್ನೆಗೆ ಉತ್ತರ ಹುಡುಕುತ್ತಾ ಸಾಗುವ ಪ್ರತಿಯೊಬ್ಬನೂ ಶಿಕ್ಷಕ. ಮತ್ತು, ತನ್ನನ್ನೇ ಪ್ರತಿದಿನ ತಿದ್ದಿಕೊಳ್ಳುವವನೇ ನಿಜವಾದ ಶಿಕ್ಷಕ.

FAQs

Share

Facebook
WhatsApp
X

Comment

Leave a Reply