ಹಸಿರು ಹಾಸಿನ ಅಂಗಳದಲ್ಲಿ
ಮೈತಳೆದು ನಿಂತ ಮರಗಳು
ಮೋಡವಿಲ್ಲದ ಬಾನಂಗಳದಲ್ಲಿ
ಸಂತಸದಿ ಹಾರಾಡುವ
ಬಾನಾಡಿಗಳು
ಪ್ರಕೃತಿಯ ಸೊಬಗಿನ ಮಡಿಲಲ್ಲಿ
ಪಚ್ಚೆ ಹಸುರಿನ ಹುಲ್ಲಿನಲಿ
ಭವಿಷ್ಯ ಬೆಳಗುವ ಪುಸ್ತಕ ಕೈಯಲ್ಲಿ
ಪುಟದ ವಿವರ ಮಸ್ತಕಕಿಳಿಸುವ ಪ್ರಯತ್ನದಲ್ಲಿ
ಒಂದೊಂದು ಮನ ಒಂದೊಂದು ತರ
ತರ ತರದ ಮಧ್ಯದಲ್ಲಿ ತವಕಗಳೇ ಹೆಚ್ಚು
ಹೆಚ್ಚಿದ ತವಕದಲ್ಲಿ ಬೆಪ್ಪಾಗದೆ
ಎಲ್ಲರೂ ಒಪ್ಪುವಂತಾಗಬೇಕು ಎಲೆ ಮನವೇ…
ನಿನ್ನಲ್ಲಿ ನೀನಾಗಿ ಎಲ್ಲರ
ಒಲುಮೆ ನಿನಗಾಗಿ ಸಿಗಲಿ
ಪ್ರಯತ್ನಿಸು ಪ್ರತಿದಿನ ಪ್ರತಿ ಕ್ಷಣವ
ನೀ ಕಂಡ ಕನಸು ನನಸಾಗಲು
ವಯಸ್ಸು ಹದಿನಾರೀಗ, ಇದು
ಬದುಕಿನ ಮೊದಲ ಮೆಟ್ಟಿಲು ನೋಡ
ಮನವು ಚಂಚಲ ಸ್ಥಿರವಾಗಿರಲಿ ಸದಾ
ಎಲ್ಲವನ್ನು ಮೆಟ್ಟಿದವನು ಪಟ್ಟಕ್ಕೇರುವನು ನೋಡ
ಕನಸು ಕಾಣುತಲಿಹವು ಹೆತ್ತೊಡಲುಗಳು
ಉತ್ತುಂಗಕ್ಕೇರುವ ಬಯಕೆ ಮನದಲ್ಲಿ
ಬಯಕೆಗಳೆಲ್ಲ ಬದುಕಿಗೆ ಬೆಳಕಾಗಲಿ
ಆ ಬೆಳಕಲ್ಲಿ ನಿನ್ನ ಕನಸಿನ ಜಗವ ಬದಲಾಗಲಿ
ರಮೇಶ್ ಪೂಜಾರಿ
ಕನ್ನಡ ಶಿಕ್ಷಕರು
ಎಂ. ಎಸ್. ವಿ ಪಬ್ಲಿಕ್ ಸ್ಕೂಲ್


